ಅಭಿಪ್ರಾಯ / ಸಲಹೆಗಳು

ಸಂಸ್ಥೆಯ ಬಗ್ಗೆ

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)

ಧಾರವಾಡ - 580 011, ಕರ್ನಾಟಕ 

ಹಿನ್ನೆಲೆ

ಕರ್ನಾಟಕವು ಭಾರತದ ಎಂಟನೇಯ ದೊಡ್ಡ ರಾಜ್ಯವಾಗಿದ್ದು, ಡೆಕ್ಕನ್‌ ಪ್ರಸ್ಥಭೂಮಿಯ ಭಾಗವಾಗಿದೆ. ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶ 19.18 ಮಿ. ಹೆಕ್ಟೇರ್‌ ಇದ್ದು, ಅದು ಭಾರತದ 5.83 ಪ್ರತಿಶತವಾಗಿದೆ. ರಾಜ್ಯದಲ್ಲಿ ಒಟ್ಟಾರೆ ಏಳು ನದಿ ಕೊಳ್ಳಗಳಿದ್ದು, 3,475 ಟಿ.ಎಂ.ಸಿ ಜಲ ಸಂಪನ್ಮೂಲವನ್ನು ಒಳಗೊಂಡಿದೆ. ರಾಜ್ಯದ ನೀರಿನ ಸಂಪನ್ಮೂಲದ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ಗಣನೀಯ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ. ಹಲವಾರು ದೊಡ್ಡ ಮತ್ತು ಸಣ್ಣ ಆಣೆಕಟ್ಟುಗಳನ್ನು ಹಾಗೂ ನದಿ, ಕೊಳ್ಳಗಳ ವರ್ಧನೆಯ ಮೂಲಕ ನೀರಿನ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಬೆಳವಣಿಗೆಗಳು ಕೃಷಿ ಉತ್ಪಾದನೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಕೈಗೊಳ್ಳುವಲ್ಲಿ ಪೂರಕವಾಗಿವೆ. 

ಕರ್ನಾಟಕವು ಸಾಕಷ್ಟು ಪ್ರಮಾಣದ ಮಳೆ ಹಾಗೂ ನೀರಿನ ಸಂಪನ್ಮೂಲವನ್ನು ಹೊಂದಿದ್ದರೂ ರಾಜ್ಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಇತ್ತೀಚೆಗೆ ನಿರಂತರ ಬರಗಾಲವನ್ನು ಅನುಭವಿಸುತ್ತಿದೆ. ಸಾಕಷ್ಟು ನೀರಿನ ಲಭ್ಯತೆಯ ಹೊರತಾಗಿಯೂ ಸುಮಾರು 67 ಪ್ರತಿಶತದಷ್ಟಿರುವ ಒಣ ಭೂಪ್ರದೇಶವನ್ನು ಹೊಂದಿದ್ದು ಗಂಭೀರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ತ್ವರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಜೀವನಶೈಲಿಯಿಂದಾಗಿ ಜಲ ಸಂಪನ್ಮೂಲದ ಮೇಲಿನ ಒತ್ತಡ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಜಲ ಸಂಪನ್ಮೂಲಗಳ ತಲಾವಾರು ಲಭ್ಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಅನಿಯಮಿತ ಮಳೆ ಮತ್ತು ಅಂತರರಾಜ್ಯಗಳ ನದಿ ನೀರಿನ ವಿವಾದಗಳು ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿವೆ. ಜೊತೆಗೆ, ಹವಾಮಾನ ವೈಪರೀತ್ಯದಿಂದಾಗುವ ಜಲ ಸಂಪನ್ಮೂಲಗಳ ಮೇಲಾಗುವ ಪರಿಣಾಮಗಳನ್ನೂ ಸಹ ನಿರ್ಲಕ್ಷಿಸಲಾಗುವುದಿಲ್ಲ. ಕರ್ನಾಟಕದಲ್ಲಿ ಅಂತರ್ಜಲವೂ ಸಹ ಪ್ರಮುಖ ಜಲ ಮೂಲವಾಗಿದ್ದು ಅದರ ನಿರ್ವಹಣೆ ಅನೇಕ ಸಮಸ್ಯೆಗಳಿಂದ ಕೂಡಿದೆ. ಜಲ ಸಂಪನ್ಮೂಲದ ದುರುಪಯೋಗ ಹಾಗೂ ಜಲಾನಯನ ಪ್ರದೇಶಗಳ ಅಸಮರ್ಪಕ ನಿರ್ವಹಣೆ ನೀರಿನ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಪರಿಣಾಮವಾಗಿ ರಾಜ್ಯದ ಅನೇಕ ಭಾಗಗಳಲ್ಲಿ ನೀರಿನ ಸಂಕಷ್ಟ ಉಂಟಾಗುತ್ತಿದೆ. 

ಭೂಮಿಯ ವಿಷಯದಲ್ಲೂ ಇದೇ ರೀತಿಯ ಸವಾಲುಗಳಿವೆ. ಅವ್ಯಾಹತವಾಗಿ ನಡೆಯುತ್ತಿರುವ ಭೂ ಸಂಪನ್ಮೂಲದ ಶೋಷಣೆಯಿಂದಾಗಿ ಕೃಷಿಗೆ ಲಭ್ಯವಾಗಲಿರುವ ನಿವ್ವಳ ಕ್ಷೇತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಭೂ ಸಂಪನ್ಮೂಲದ ಗುಣಮಟ್ಟದಲ್ಲೂ ಸಾಕಷ್ಟು ಕುಸಿತವಾಗಿದೆ. ಭೂ ಸಂಪತ್ತಿಗಾಗಿ ಪೈಪೋಟಿ ಉಂಟಾಗುತ್ತಿದ್ದು ತತ್ಪರಿಣಾಮ ಭೂಮಿಯ ಕೊರತೆಯಿಂದಾಗಿ ಕಲಹಗಳು ಉಂಟಾಗುತ್ತಿವೆ. ಅಚ್ಚುಕಟ್ಟು ಪ್ರದೇಶಗಳಲ್ಲಂತೂ ನೀರು ಹಾಗೂ ಮಣ್ಣಿನ ಅಸಮರ್ಪಕ ನಿರ್ವಹಣೆಯಿಂದಾಗಿ ಅನೇಕ ಜಲ ಹಾಗೂ ನೆಲ ಸಂಬಂಧಿತ ಸಂಕಷ್ಟಗಳು ಉದ್ಭವವಾಗಿವೆ. ಈ ಸವಾಲುಗಳನ್ನು ಸರಿಪಡಿಸುವ ದೃಷ್ಟಿಯಿಂದ ಮತ್ತು ಜಲ ಹಾಗೂ ಭೂ ಸಂಪನ್ಮೂಲಗಳ ಸಮಗ್ರ ನಿರ್ವಹಣೆಯ ಅಗತ್ಯಗಳನ್ನು ಪೂರೈಸುವ ಪ್ರಧಾನ ಉದ್ದೇಶದಿಂದ ವಾಲ್ಮಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

 

ಸ್ಥಾಪನೆ

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯು ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ವಿಶ್ವಬ್ಯಾಂಕಿನ ನೆರವಿನಿಂದ 28-05-1985 ರಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಭೀಮರಾಯನ ಗುಡಿಯಲ್ಲಿ ಪ್ರಾರಂಭವಾಯಿತು. ಸಂಸ್ಥೆಯು “ವಾಲ್ಮಿ ಸೊಸೈಟಿ” ಎಂಬ ಹೆಸರಿನಲ್ಲಿ ಸಂಘಗಳ (ಸೊಸೈಟಿ) ನೋಂದಣಿ ಕಾಯ್ದೆ 1960 ಅಡಿಯಲ್ಲಿ (ಜೂನ 16 1986ರ ನೋಂದಣಿ ಪ್ರಮಾಣಪತ್ರ ಸಂಖ್ಯೆ.74/86-87 ರಡಿಯಲ್ಲಿ) ಜೂನ16, 1986 ರಂದು ನೋಂದಣಿಯಾಯಿತು. 1986 ರಲ್ಲಿ ಕೆಲವು ಅನುಕೂಲತೆಗಳಿಗಾಗಿ ಸಂಸ್ಥೆಯನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು. ಸಂಸ್ಥೆಯು ಇದೀಗ ಧಾರವಾಡ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿ ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್‌ 4) ಯಲ್ಲಿರುವ ವಿಶಾಲವಾದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

 

ಉದ್ದೇಶಗಳು

  • ಜಲ-ನೆಲ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ "ಜ್ಞಾನ ಹಾಗೂ ವಿಜ್ಞಾನ" ವನ್ನು ಪ್ರೋತ್ಸಾಹಿಸುವುದು.

  • ಜಲ ಮತ್ತು ನೆಲ ನಿರ್ವಹಣೆ ವಿಷಯದಲ್ಲಿ ರೈತರಿಗೆ, ಕೃಷಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ), ನೀರಾವರಿ ನಿಗಮಗಳ ಹಾಗೆ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡುವುದು.

  • ಜಲ ಮತ್ತು ನೆಲ ನಿರ್ವಹಣೆ ವಿಷಯದಲ್ಲಿ ಸಂಶೋಧನೆ ಕೈಗೊಳ್ಳುವುದು.

  • ಸರಕಾರ ಮತ್ತು ಸಂಬಂಧಪಟ್ಟ ಇಲಾಖೆ / ಸಂಸ್ಥೆಗಳಿಗೆ ಸಲಹೆ/ ಮಾರ್ಗದರ್ಶನ ನೀಡುವುದು.

  • ವಿಶ್ವ ವಿದ್ಯಾಲಯಗಳು ಹಾಗೂ ಸಂಬಂಧಿತ ಶೈಕ್ಷಣಿಕ /ತರಬೇತಿ ಸಂಸ್ಥೆಗಳೊಂದಿಗೆ ಸಹಯೋಗವನ್ನು ಏರ್ಪಡಿಸುವುದು.

  • ಜಲ ಮತ್ತು ನೆಲ ನಿರ್ವಹಣೆ ಕುರಿತು ವಿಚಾರಗೋಷ್ಠಿ, ಕಾರ್ಯಾಗಾರಗಳನ್ನು ಸಂಘಟಿಸುವುದು.

  • ಜಲ ಮತ್ತು ನೆಲ ನಿರ್ವಹಣೆ ವಿಷಯದಲ್ಲಿ ಲೇಖನ, ವರದಿ, ಪತ್ರಿಕೆಗಳು ಇತ್ಯಾದಿಗಳನ್ನು ಪ್ರಕಟಿಸುವುದು. 

 

ಆಡಳಿತ

ಸಂಸ್ಥೆಯ ಆಡಳಿತವು ಆಡಳಿತ ಮಂಡಳಿಯಿಂದ ನಿಯಂತ್ರಿಸಲ್ಪಡುತ್ತದೆ. ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವಾಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದು, ವಾಲ್ಮಿ ಸಂಸ್ಥೆಯ ನಿರ್ದೇಶಕರು ಆಡಳಿತ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಆಡಳಿತ ಮಂಡಳಿಯು ಒಟ್ಟು 15 ಸದಸ್ಯರನ್ನೊಳಗೊಂಡಿದ್ದು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ಇಲಾಖೆಗಳ/ಸಂಸ್ಥೆಗಳ/ವಿಶ್ವ ವಿದ್ಯಾಲಯಗಳ ಮುಖ್ಯಸ್ಥರಾಗಿರುತ್ತಾರೆ.

 

ಕಾರ್ಯಕ್ರಮಗಳು 

    ಸಂಸ್ಥೆಯು ವರ್ಷವಿಡೀ ವಿವಿಧ ತೆರನಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಕಾರ್ಯಕ್ರಮ ಅನುಷ್ಠಾನಕ್ಕಾಗಿ ಸಮಗ್ರ ಕ್ರೀಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸುತ್ತದೆ. ಅವುಗಳಲ್ಲಿ ಪ್ರಮುಖವಾಗಿ:

 

ಬೋಧನೆ/ತರಬೇತಿ

      ನೀರಾವರಿ ನಿರ್ವಹಣೆಯಲ್ಲಿ ರೈತರ ಪಾಲ್ಗೊಳ್ಳುವಿಕೆ, ನೀರಿನ ನಿರ್ವಹಣೆ, ನೀರಾವರಿಗಾಗಿ ಭೂಮಿ ಅಭಿವೃದ್ಧಿಪಡಿಸುವುದು ಮತ್ತು ನೀರಿನ ಅಸಮರ್ಪಕ ಬಳಕೆಯಿಂದಾಗಿ ಭೂಮಿ ಸವಳು-ಜವಳಾಗುವುದನ್ನು ತಡೆಯುವುದು ಮುಂತಾದ ವಿಷಯಗಳ ಕುರಿತು ತರಬೇತಿಗಳನ್ನು ಏರ್ಪಡಿಸಲಾಗುತ್ತಿದೆ.

 

ತರಬೇತಿ ಸಂಶೋಧನೆ

      ಸಂಸ್ಥೆಯು ಜಲ ಮತ್ತು ನೆಲ ನಿರ್ವಹಣೆಗೆ ಸಂಭಂದ ಪಟ್ಟ ಸಂಶೋಧನೆಯನ್ನು ಕೈಗೊಳ್ಳುತ್ತದೆ ಹಾಗೂ ನೀತಿ ನಿರೂಪಣೆಯಲ್ಲಿ ಪಾಲ್ಗೊಳ್ಳತ್ತದೆ.

 

ಪ್ರಾತ್ಯಕ್ಷಿಕೆ

      ತರಬೇತುದಾರರ ಕೌಶಲ್ಯ ಅಭಿವೃದ್ಧಿಗಾಗಿ ಬೆಳೆ ನಿರ್ವಹಣೆಯಲ್ಲಿ ಭೂಮಿ ಮತ್ತು ನೀರಿನ ಪಾತ್ರ ಕುರಿತು ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳುವುದು.

 

ತಾಂತ್ರಿಕ ಸಮಾಲೋಚನೆ

      ಜಲ ಸಂಪನ್ಮೂಲ ಇಲಾಖೆ, ಜಲ ಮಂಡಳಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ, ಕೃಷಿ ಇಲಾಖೆ ಹಾಗೂ ನೀರಾವರಿಗೆ ಸಂಭಂದಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುವುದು.

 

ಪ್ರಕಟಣೆ

      ತರಬೇತಿ ಕೈಪಿಡಿ, ಕರಪತ್ರ, ಪುಸ್ತಕ, ಪತ್ರಿಕೆ, ಸಂಶೋಧನಾ ಹಾಗೂ ಜನಪ್ರಿಯ ಲೇಖನಗಳನ್ನು ಪ್ರಕಟಣೆಗೊಳಿಸುವದು.

 

ಕ್ಷೇತ್ರ ಬೇಟಿ

      “ನೋಡುವುದರ ಮೂಲಕ ನಂಬುವುದು” ಎಂಬ ತತ್ವದ ಆಧಾರದ ಮೇಲೆ ತರಬೇತಿದಾರರಿಗೆ ಕ್ಷೇತ್ರ ಭೇಟಿಯನ್ನು ಏರ್ಪಡಿಸುವುದು.

 

ತಾಂತ್ರಿಕ ಗೋಷ್ಠಿಗಳು

       ಜಲ ಹಾಗೂ ನೆಲ ನಿರ್ವಹಣೆ ಕುರಿತಾದ ವಿಚಾರಗೋಷ್ಠಿ, ವಿಚಾರ ಸಂಕಿರಣ, ಕಾರ್ಯಾಗಾರ, ಸಂವಾದಗಳನ್ನು ಏರ್ಪಡಿಸುವುದು.

 

ಪ್ರಾತ್ಯಕ್ಷಿಕೆಗಳು

       ತರಬೇತುದಾರರ ಪ್ರಾಯೋಗಿಕ ಜ್ಞಾನಾಭಿವೃದ್ಧಿಗಾಗಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

 

ಬೋಧಕರು

ವಾಲ್ಮೀಯು ವಿವಿಧ ವಿಷಯಗಳ ಅಂತರ ಶಾಸ್ತ್ರೀಯ ಸಂಸ್ಥೆಯಾಗಿರುವುದರಿಂದ ಕೃಷಿ, ನೀರಾವರಿ, ನೀರು ನಿರ್ವಹಣೆ, ಅರ್ಥಶಾಸ್ತ್ರ ಹಾಗೂ ಇನ್ನಿತರ ಸಮಾಜಶಾಸ್ತ್ರ ಬೋಧಕರನ್ನು ಹೊಂದಿದೆ. ಪ್ರಸ್ತುತ, ಬೋಧಕರನ್ನು ರಾಜ್ಯ ಸರಕಾರದ ಇಲಾಖೆಗಳು ಹಾಗೂ ವಿಶ್ವ ವಿದ್ಯಾಲಯಗಳಿಂದ ನಿಯೋಜಿಸಲಾಗಿದೆ. ಹೆಚ್ಚುವರಿ ಜ್ಞಾನ ಮತ್ತು ಪರಿಣಿತಿಗಾಗಿ ರಾಜ್ಯ/ದೇಶದ ತಜ್ಞರನ್ನು ಅವಾನಿಸಲಾಗುತ್ತಿದೆ.

 

ಮೂಲಭೂತ ಸೌಕರ್ಯಗಳು

ವಾಲ್ಮಿ ಸಂಸ್ಥೆಯ ಅಡಿಯಲ್ಲಿ ಒಟ್ಟು 137 ಎಕರೆ ಭೂಮಿ ಲಭ್ಯವಿದ್ದು, ಅದರಲ್ಲಿ ಸುಮಾರು 53 ಎಕರೆ ಪ್ರಾತ್ಯಕ್ಷಿಕೆಗಾಗಿ ಹಾಗೂ 14 ಎಕರೆ ತೋಟಗಾರಿಕೆ ಬೆಳೆಗಳಿಗಾಗಿ ಬಳಸಲಾಗುತ್ತಿದೆ. ಸುಮಾರು 70 ಎಕರೆ ಕ್ಷೇತ್ರದಲ್ಲಿ ಆಡಳಿತ ಹಾಗೂ ಶೈಕ್ಷಣಿಕ ಕಟ್ಟಡಗಳು, ಅತಿಥಿಗೃಹ, ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆವರಣದಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗಾಗಿ ಒಂದು ಕೆರೆ ಹಾಗೂ ಐದು ಕೊಳವೆ ಬಾವಿಗಳು ಲಭ್ಯವಿರುತ್ತವೆ. ಸಂಸ್ಥೆಯು ಆಡಳಿತ ಭವನ, ಶೈಕ್ಷಣಿಕ ಕಟ್ಟಡ, ವರ್ಗ ಕೋಣೆಗಳು, ಪ್ರಯೋಗ ಶಾಲೆಗಳು, ಗ್ರಂಥಾಲಯ, ಸಾರಿಗೆ ಹಾಗೂ ಪ್ರೇಕ್ಷಾ ಗೃಹ ಸೌಲಭ್ಯಗಳನ್ನು ಹೊಂದಿರುತ್ತದೆ. ಸೂಕ್ತ ತರಬೇತಿಗಾಗಿ ಗಣಕಯಂತ್ರಗಳು, ಆಧುನಿಕ ಬೋಧನಾ ವಿಧಾನಗಳಾದ ಅಕ್ಟಿವ್ಬೋರ್ಡ, ಎಲ್‌ಸಿಡಿ, ಕ್ಯಾಮರಾ, ಪ್ರದರ್ಶನ ಹಲಗೆಗಳು, ಅಂತರ್ಜಾಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಪ್ರಾತ್ಯಕ್ಷಿಕೆಗಳಿಗಾಗಿ ಆಧುನಿಕ ನೀರಾವರಿ ತಂತ್ರಜ್ಞಾನದ ಮಾದರಿಗಳು, ಸೂಕ್ಷ್ಮ ನೀರಾವರಿ ಮಾದರಿಗಳು, ರೇನಗನ್, ಹೈಡ್ರಾಲಿಕ್ಪ್ರ ಯೋಗ ಶಾಲೆ ಮುಂತಾದವುಗಳು ಲಭ್ಯವಿರುತ್ತವೆ. ಸಂಸ್ಥೆಯು ಅವಶ್ಯ ಸಾರಿಗೆ ಸೌಲಭ್ಯ ಹೊಂದಿರುತ್ತದೆ. ಆವರಣದಲ್ಲಿ 24x7 ನೀರು ಮತ್ತು ವಿದ್ಯಚ್ಛಕ್ತಿ ಸರಬರಾಜು ಹೊಂದಿದೆ.

 

ಪ್ರಗತಿ

ಸಂಸ್ಥೆಯು ನಿರಂತರವಾಗಿ ತರಬೇತಿ, ಸಂಶೋಧನೆ ಹಾಗೂ ನೀತಿನಿರೂಪಣೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಸಂಸ್ಥೆಯ ಅಧಿಕಾರಿಗಳು ಹಾಗೂ ಬೋಧಕರು ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಸಮೀತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಸ್ಥಾಪನೆಯಿಂದ (1986) 2016-17ರ ವರೆಗೆ ಸುಮಾರು 65 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ 2009-10 ರಿಂದ ಇಲ್ಲಿಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 100 ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಸಮರ್ಪಕ ಜಲ ಮತ್ತು ನೆಲ ನಿರ್ವಹಣೆಯಿಂದ ಮಲಪ್ರಭಾ ಹಾಗೂ ಘಟಪ್ರಭಾ ಯೋಜನೆಗಳಡಿಯಲ್ಲಿ ಜವಳು ಹಾಗೂ ಸವಳು ಸಮಸ್ಯೆಗಳು ಉಂಟಾಗಿದ್ದು, ಸರ್ಕಾರದ ಆದೇಶದ ಮೇರೆಗೆ ಸಹಭಾಗಿತ್ವ ಹಾಗೂ ಸುಸ್ಥಿರ ಜಲ ಮತ್ತು ನೆಲ ನಿರ್ವಹಣೆ ಕುರಿತು ಕ್ರಿಯಾ ಯೋಜನೆ ಹಾಗೂ ನೆರವು ಕೂಟವನ್ನು ರಚಿಸಲಾಗಿತ್ತು. ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿ ರೈತರಿಗೆ ಜವಳು ಹಾಗೂ ಸವಳು ಬಗ್ಗೆ ಅರಿವು ಮೂಡಿಸಿ ಸ್ವಪ್ರೇರಿತರಾಗಿ ತಾವೇ ಭೂಮಿ ಸುಧಾರಣೆಗಳನ್ನು ಮಾಡಿಕೊಳ್ಳುವಂತೆ ಮಾಡಿದೆ (2012-13). Sustainable Sugarcane Initiative (SSI) JOGO Systematic Rice Intensification (SRI) ಎಂಬ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸಲಾಗಿದೆ.

ಇತ್ತೀಚಿನ ನವೀಕರಣ​ : 17-05-2022 11:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080